ಮಗು ಹಾಡು ಕೇಳ್ತಾ ನಿದ್ದೆ ಹೋಗೋದು ಸಾಮಾನ್ಯ..ಸಂಗೀತ ಸುಧೆ ಎಳೆ ಕಂದಮ್ಮನಿಗೂ ಬಲು ಇಷ್ಟ. ನಮ್ಮ ಜನಪದ ಕಣಜದಿಂದ (ನನ್ನ ಪಾಲಿಗೆ ಅದು ನಮ್ಮಮ್ಮ ಮತ್ತು ಅತ್ತೆ.. :-)) ನಂದನ್ ಗಾಗಿ ಆಯ್ದ ಕೆಲವು ಲಾಲಿ ಪದಗಳು..
ಹಾಸಿಗಿ ನೆಲ ತಿಂತ
ಮಾದಿಟ್ಟ ಅಡಿಗಿ ಒಲಿ ತಿಂತ
ಪುಟ್ಟಕ್ನ ಇದ್ದಷ್ಟು ಮೂಗು ಇಲಿ ತಿಂತ..
ಆಡಿ ಬಾ ನನ ಕಂದ
ಅಂಗಾಲ ತೊಳದೇನ
ತೆಂಗಿನ ಕಾಯಿ ತಿಳಿ ನೀರು
ತೆಂಗಿನ ಕಾಯಿ ತಿಳಿ ನೀರ ತಕ್ಕೊಂಡು
ಕಂದಮ್ನ ಪಾದ ತೊಳದೇನ..
ಕೂಸು ಇದ್ದ ಮನಿಗಿ
ಬೀಸಣಿಕಿ ಯಾತಕ
ಕೂಸು ಕಂದಮ್ಮ ಒಳ-ಹೊರಗ
ಕೂಸು ಕಂದಮ್ಮ ಒಳ-ಹೊರಗ ಆಡಿದರ
ಬೀಸಣಿಕಿ ಗಾಳಿ ಸುಳಿದಾವ
ಸವಣೂರ ಹಾದ್ಯಾಗ
ಹವಳ ಬಣ್ಣದ ಪಕ್ಷಿ
ತಲಸೂಲಿ ಎಂದು ಅಳತಿತ್ತ
ನಂದನ್ ನ ಚೆಲ್ವಿಕಿ ಕಂಡು ನಗತಿತ್ತ..
ಆ ಊರು - ಈ ಊರು
ಜೋಗಿ ಜಂಗಮನೂರು
ನೀರಿಲ್ಲದೂರು ನರಗುಂದ
ನರಗುಂದ ದೇಸಾಯ್ರು
ಹಾಲಲ್ಲೆ ಮುಖವ ತೊಳೆದಾರ..
ಹಾಲ್ಬೇಡಿ ಅತ್ತಾನ
ಕೋಲ್ಬೇಡಿ ಕುಣಿದಾನ
ಮೊಸರ್ಬೇಡಿ ಕೆಸರ ತುಳಿದಾನ
ನಂದನ್ ನ ಕುಸುರಿನ ಗೆಜ್ಜಿ ಕೆಸರಾತು..
ಆಡುತಾಡುತ ಹೋಗಿ
ಜೋಡೆರಡು ಮನಿ ಕಟ್ಟಿ
ಮಾಡ್ಯಾನ ಗೊಂಬಿ ಮದವೀಯ
ಮದವೀಯ ನಂದನ್
ಬೇಡ್ಯಾನ ಬ್ಯಾಳಿ-ಬೆಲ್ಲವ
ಯಾಕ ಅಳತಾನಂತ
ಎಲ್ಲಾರು ಕೇಳಿದರ
ಕಾಯದ ಹಾಲ ಕೆನಿ ಬೇಡಿ
ಕೆನಿ ಬೇಡಿ ಅತ್ತತ್ತು
ಕಾಡಿ ಕೈಯಿಂದ ಇಳಿವಲ್ಲ..
ಯಾಕಳುವಿ ನನ ಕಂದ
ಬೇಕಾದ್ದು ನಿನಗೇನು
ನಾಕೆಮ್ಮೆ ಕರೆದ ನೊರೆ ಹಾಲು
ನೊರೆ ಹಾಲು ಕುಡಿಸಿದರ
ಗಪ್ಪು-ಚಿಪ್ಪಾಗಿ ಮಲಗ್ಯಾನ..
ಅತ್ತಿ ನಿ ಅಸಿ ಕಲ್ಲು
ನಾದಿನಿ ಗುಂಡಕಲ್ಲು
ಮಂಡ ಮೂಗಿನ ಮೈದ್ನಂದ್ರು..
ಇವರು ಮೂರು ಮಂದಿ
ಗಂಡನ ಕಡಿಯ ಬಳಗವ್ವ..
ನಂದನ್ ನ ಆಟೇನ
ಮಲ್ಲಿಗಿ ತ್ವಾಟೇನ
ಅಲ್ಲಿ ತಾವರೆ ಕಮಲೇನ
ಕಮಲ ಬೆಳದಿಂಗಳ
ಎಲ್ಲರಂಗಳಕ ಛೆಲ್ಲ್ಯಾನ..
ನಂದನ್ ಹುಟ್ಟಲಿ
ಹೊಸ ಪ್ಯಾಟಿ ಕಟ್ಟಲಿ
ರಸಬಾಳಿ ಕಬ್ಬು ಬೆಳೆಯಲಿ
ಬೆಳೆಯಲಿ ಮಂಚಾಲಿ
ರಾಯರ ತೇರು ಎಳಿಯಲಿ..
ಮಂಚಾಲಿ ರಾಯರಿಗೆ
ಮೊದಲು ಬೇಡಿಕೊಂಬೆ
ಮಂಚದ ಮೇಲೆ ಮಗ-ಸೊಸೆ
ಮಗ-ಸೊಸೆ ಕೂತರ
ಮಂಚಕ್ಕ ಮುತ್ತ ಹೆಣಿಸೇನ..
ಅತ್ತರ ಅಳಲವ್ವ
ಈ ಕೂಸು ನಮಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ
ಮನಿಗೆಲಸ ನಂದನ್ ಅಂಥ
ಮಕ್ಕಳಿರಲವ್ವ ಮನಿ ತುಂಬ..