Friday, December 12, 2008

ಲಾಲಿ ಪದಗಳು


ಮಗು ಹಾಡು ಕೇಳ್ತಾ ನಿದ್ದೆ ಹೋಗೋದು ಸಾಮಾನ್ಯ..ಸಂಗೀತ ಸುಧೆ ಎಳೆ ಕಂದಮ್ಮನಿಗೂ ಬಲು ಇಷ್ಟ. ನಮ್ಮ ಜನಪದ ಕಣಜದಿಂದ (ನನ್ನ ಪಾಲಿಗೆ ಅದು ನಮ್ಮಮ್ಮ ಮತ್ತು ಅತ್ತೆ.. :-)) ನಂದನ್ ಗಾಗಿ ಆಯ್ದ ಕೆಲವು ಲಾಲಿ ಪದಗಳು..

ಕೂಸು ಕುಂಚಿಗಿ ತಿಂತ
ಹಾಸಿಗಿ ನೆಲ ತಿಂತ
ಮಾದಿಟ್ಟ ಅಡಿಗಿ ಒಲಿ ತಿಂತ
ಪುಟ್ಟಕ್ನ ಇದ್ದಷ್ಟು ಮೂಗು ಇಲಿ ತಿಂತ..

ಆಡಿ ಬಾ ನನ ಕಂದ
ಅಂಗಾಲ ತೊಳದೇನ
ತೆಂಗಿನ ಕಾಯಿ ತಿಳಿ ನೀರು
ತೆಂಗಿನ ಕಾಯಿ ತಿಳಿ ನೀರ ತಕ್ಕೊಂಡು
ಕಂದಮ್ನ ಪಾದ ತೊಳದೇನ..

ಕೂಸು ಇದ್ದ ಮನಿಗಿ
ಬೀಸಣಿಕಿ ಯಾತಕ
ಕೂಸು ಕಂದಮ್ಮ ಒಳ-ಹೊರಗ
ಕೂಸು ಕಂದಮ್ಮ ಒಳ-ಹೊರಗ ಆಡಿದರ
ಬೀಸಣಿಕಿ ಗಾಳಿ ಸುಳಿದಾವ

ಸವಣೂರ ಹಾದ್ಯಾಗ
ಹವಳ ಬಣ್ಣದ ಪಕ್ಷಿ
ತಲಸೂಲಿ ಎಂದು ಅಳತಿತ್ತ
ನಂದನ್ ನ ಚೆಲ್ವಿಕಿ ಕಂಡು ನಗತಿತ್ತ..

ಆ ಊರು - ಈ ಊರು
ಜೋಗಿ ಜಂಗಮನೂರು
ನೀರಿಲ್ಲದೂರು ನರಗುಂದ
ನರಗುಂದ ದೇಸಾಯ್ರು
ಹಾಲಲ್ಲೆ ಮುಖವ ತೊಳೆದಾರ..

ಹಾಲ್ಬೇಡಿ ಅತ್ತಾನ
ಕೋಲ್ಬೇಡಿ ಕುಣಿದಾನ
ಮೊಸರ್ಬೇಡಿ ಕೆಸರ ತುಳಿದಾನ
ನಂದನ್ ನ ಕುಸುರಿನ ಗೆಜ್ಜಿ ಕೆಸರಾತು..

ಆಡುತಾಡುತ ಹೋಗಿ
ಜೋಡೆರಡು ಮನಿ ಕಟ್ಟಿ
ಮಾಡ್ಯಾನ ಗೊಂಬಿ ಮದವೀಯ
ಮದವೀಯ ನಂದನ್
ಬೇಡ್ಯಾನ ಬ್ಯಾಳಿ-ಬೆಲ್ಲವ

ಯಾಕ ಅಳತಾನಂತ
ಎಲ್ಲಾರು ಕೇಳಿದರ
ಕಾಯದ ಹಾಲ ಕೆನಿ ಬೇಡಿ
ಕೆನಿ ಬೇಡಿ ಅತ್ತತ್ತು
ಕಾಡಿ ಕೈಯಿಂದ ಇಳಿವಲ್ಲ..

ಯಾಕಳುವಿ ನನ ಕಂದ
ಬೇಕಾದ್ದು ನಿನಗೇನು
ನಾಕೆಮ್ಮೆ ಕರೆದ ನೊರೆ ಹಾಲು
ನೊರೆ ಹಾಲು ಕುಡಿಸಿದರ
ಗಪ್ಪು-ಚಿಪ್ಪಾಗಿ ಮಲಗ್ಯಾನ..

ಅತ್ತಿ ನಿ ಅಸಿ ಕಲ್ಲು
ನಾದಿನಿ ಗುಂಡಕಲ್ಲು
ಮಂಡ ಮೂಗಿನ ಮೈದ್ನಂದ್ರು..
ಇವರು ಮೂರು ಮಂದಿ
ಗಂಡನ ಕಡಿಯ ಬಳಗವ್ವ..

ನಂದನ್ ನ ಆಟೇನ
ಮಲ್ಲಿಗಿ ತ್ವಾಟೇನ
ಅಲ್ಲಿ ತಾವರೆ ಕಮಲೇನ
ಕಮಲ ಬೆಳದಿಂಗಳ
ಎಲ್ಲರಂಗಳಕ ಛೆಲ್ಲ್ಯಾನ..

ನಂದನ್ ಹುಟ್ಟಲಿ
ಹೊಸ ಪ್ಯಾಟಿ ಕಟ್ಟಲಿ
ರಸಬಾಳಿ ಕಬ್ಬು ಬೆಳೆಯಲಿ
ಬೆಳೆಯಲಿ ಮಂಚಾಲಿ
ರಾಯರ ತೇರು ಎಳಿಯಲಿ..

ಮಂಚಾಲಿ ರಾಯರಿಗೆ
ಮೊದಲು ಬೇಡಿಕೊಂಬೆ
ಮಂಚದ ಮೇಲೆ ಮಗ-ಸೊಸೆ
ಮಗ-ಸೊಸೆ ಕೂತರ
ಮಂಚಕ್ಕ ಮುತ್ತ ಹೆಣಿಸೇನ..

ಅತ್ತರ ಅಳಲವ್ವ
ಈ ಕೂಸು ನಮಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ
ಮನಿಗೆಲಸ ನಂದನ್ ಅಂಥ
ಮಕ್ಕಳಿರಲವ್ವ ಮನಿ ತುಂಬ..

Friday, November 28, 2008

ಅಮ್ಮಾ ನಿನ್ನ ಎದೆಯಾಳದಲ್ಲಿ..



ನಂದನ-ವನದಲ್ಲಿ ಮೊದಲ ಹೆಜ್ಜೆ.. ಒಂಥರ ಪುಳಕ, ಒಂಥರ ಜವಾಬ್ದಾರಿ! ಯಾವ ನೆನಪಿನ ಬುತ್ತಿ ಮೊದಲು ಬಿಚ್ಚಿಡುವುದೋ ತಿಳಿಯದಿರುವ ಗೊಂದಲ.. ನಂದನ್ ಗೆ ಈಗ ಐದು ವರೆ ತಿಂಗಳು. ಅವನ ಬಾಲ್ಯದ ಈ ಅಮೂಲ್ಯ ಬದುಕ ಹನಿಗಳನ್ನು ಈ ಬೊಗಸೆಯಲ್ಲಿ ಹಿಡಿದಿಡುವ ಹಂಬಲ.. ಅದಕ್ಕಾಗಿ ಈ ಪುಟ್ಟ ಹೆಜ್ಜೆ.. ನಂದನ್ ನ ಅಚ್ಚರಿ ಭರಿತ ಕನಸು ಕಂಗಳೊಂದಿಗೆ ನಿಮ್ಮೆದುರಿಗೆ ಪ್ರತ್ಯಕ್ಷ..
ಪುಟ್ಟ ಕಂದ ತನ್ನ ಪುಟ್ಟ-ಪುಟ್ಟ ಪಾದಗಳಿಂದ ಒಡಲೊಳಗೆ ಡಿಶುಂ-ಡಿಶುಂ ಮಾಡಿದ ಅನುಭವದ ನೆನಪು ಯಾವ ತಾಯಿಗಾದರೂ ಅತಿ ಪ್ರೀತಿಯದು..

ಆ ದಿನಗಳಲ್ಲಿ.. ಬಿ.ಆರ್. ಲಕ್ಷ್ಮಣ ರಾವ್ ಅವರ ಈ ಹಾಡು ಕೇಳಿ ಮುಗಿಯುವುದರಲ್ಲಿ ಕಣ್ಣಂಚಲ್ಲಿ ಒಂದು ಹನಿ ಮೂಡುತ್ತಿದುದು ನಿಶ್ಚಿತ..
ಆ ಹಾಡು ಅದರೊಂದಿಗೆ ನಂದನ್ ಹುಟ್ಟುವ ಮುಂಚಿನ ಅವನ ಒಂದು ವೀಡಿಯೋ ಕ್ಲಿಪ್:

ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು..

ಅಮ್ಮಾ..ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು..


ಕಡಿಯಲೊಲ್ಲೆ ನೀ ಕರುಳ ಬಳ್ಳಿ

ಒಲವೂಡುತಿರುವ ತಾಯೆ

ಬಿಡದ ಭುವಿಯ ಮಾಯೆ..

ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು..ಪ

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆಅಡಗಲಿ ಎಷ್ಟು ದಿನ..? ದೂಡು ಹೊರಗೆ ನನ್ನ

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆಅಡಗಲಿ ಎಷ್ಟು ದಿನ..? ದೂಡು ಹೊರಗೆ ನನ್ನ

ಓಟ ಕಲಿವೆ ಒಳ-ನೋಟ ಕಲಿವೆ

ಓಟ ಕಲಿವೆ ಒಳ-ನೋಟ ಕಲಿವೆ

ನಾ ಕಲಿವೆ ಉರ್ಧಗಮನ

ಓ ಅಗಾಧ ಗಗನ..ಓ ಅಗಾಧ ಗಗನ.. ೧

ಅಮ್ಮಾ ನಿನ್ನ..

ಮೇಲೆ ಹಾರಿ ನಿನ್ನ ಸೆಳೆತ ಮೀರಿ

ನಿರ್ಭಾರ ಸ್ಥಿತಿಗೆ ತಲುಪಿ

ಬ್ರಹ್ಮಾಂಡವನ್ನೇ ಬೆದಕಿ

ಹೋ ಮೇಲೆ ಹಾರಿ ನಿನ್ನ ಸೆಳೆತ ಮೀರಿ

ನಿರ್ಭಾರ ಸ್ಥಿತಿಗೆ ತಲುಪಿ

ಬ್ರಹ್ಮಾಂಡವನ್ನೇ ಬೆದಕಿ

ಇಂಧನ ತೀರಲು ಬಂದೇ ಬರುವೆನು

ಇಂಧನ ತೀರಲು ಬಂದೇ ಬರುವೆನು

ಮತ್ತೆ ನಿನ್ನ ತೊಡೆಗೆ

ಮೂರ್ತ ಪ್ರೇಮದೆಡೆಗೆ..

ಮೂರ್ತ ಪ್ರೇಮದೆಡೆಗೆ..೨


ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು..

ಅಮ್ಮಾ..ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು..

ಕಡಿಯಲೊಲ್ಲೆ ನೀ ಕರುಳ ಬಳ್ಳಿ

ಒಲವೂಡುತಿರುವ ತಾಯೆ

ಬಿಡದ ಭುವಿಯ ಮಾಯೆ..


ಅಮ್ಮಾ..ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು..

ಮಿಡುಕಾಡುತಿರುವೆ ನಾನು..

ಮಿಡುಕಾಡುತಿರುವೆ ನಾನು..